Monday 17 June 2013

ನಿರಪೇಕ್ಷ

     ಪಿ ಪಿ ಅಂದರೆ ಪಬ್ಲಿಕ್ ಪ್ರಾಸಿಕ್ಯೂಟರ್ ರವರ
     ಆಫೀಸಿನ ಆರ್ಸಿಸಿ ಮಾಳಿಗೆಯ ಮೇಲೆ
     ಒಂದು ಆಲದ ಮರ ಬಾಹುಗಳನು ಚಾಚಿ
     ಅಮ್ಮನ ಸೆರಗಿನ ಹಿಂದಿನಿಂದ  ತುಸುವೇ ಇಣುಕುವ

      ಪೋರನಂತೆ ಎಳೆ ಎಳೆಯಾದ ನಸುಗೆಂಪಿನ
     ಚಿಗುರನು ಪಲ್ಲವಿಸುತಾ ತುಂಟ ನಗೆಯ
      ಬೀರಿದಾಗ ಪರಿಚಯವಾದದ್ದುನನಗೆ
       ಎಂದಿನಿಂದಲೂ ಅಚ್ಚರಿ !

     ಅಲ್ಲಿ ನೆಟ್ಟವರಾರು ನೀರು ಹನಿಸಿದವರಾರು
      ಬೇರನು ಗಟ್ಟಿಯಾಗಿ ಹಿಡಿದವರಾರು
       ಕಾಲ ಕಾಲಕೆ ಉಣಿಸಿದವರಾರು
      ನಳ ನಳಿಸಿದಾಗ ಮೆಚ್ಚಿದವರಾರು
    
  ಇಂಥ ದುಃಸಾಹಸ ಅದಕಾದರೂ ಯಾಕೆ ಬೇಕಿತ್ತು
     ಉದ್ದಕ್ಕೂ ಚಾಚಿರುವ ನೆಲಕೆ ಕೊಡಬೇಕಿತ್ತೇ
       ಕಿಮ್ಮತು  ್ತಅಲ್ಲಿ ಬಾವಲಿ ನೇತಾಡಲು ಸಾಧ್ಯವೇ
      ಬಿಳಲು ಹರಡುವುದಾದರೂ ಎಲ್ಲಿ  ಜೋಕಾಲಿ ಕಟ್ಟುವೆ

     ಯೋಚಿಸಬೇಕಿತ್ತು ಅಂತಹ ಅನಿವಾರ್ಯವೇನಿತ್ತು
     ಬದುಕುವ ಸಂಭ್ರಮ ಪಲ್ಲವಿಸುವ ರೋಮಾಂಚನ
      ಸೃಷ್ಟಿಯ ನಿಗೂಢತೆಯ ಮೆರೆಸಬೇಕಿತ್ತೇ

     ಅಳಿಯುವ ಭಯ ಅಮರತ್ವದ ಆಕಾಂಕ್ಷೆ
     ಯಾವುದೂ ಇಲ್ಲದ  ಫಲಾಫೇಕ್ಷೆ ಇರದ
             ಬದುಕಿನ ಅದಮ್ಯ ಚೇತನ    

1 comment:

  1. ನನ್ನ ಮುಂಬರುವ ಕವನ ಸಂಕಲನದ ಒಂದು ಬಿಡಿ ಕವನ

    ReplyDelete