Sunday 13 July 2014

ಅಮ್ಮನ ಸೀರೆ

        ಅಮ್ಮ
        ಆಗ ಹೀಚು ಮೊಗ್ಗಾಗಿದ್ದಳಂತೆ
        ಕುಂಟಬಿಲ್ಲೆ ಆಡಿ ಆಗ ತಾನೇ ಮರಳಿದ್ದಳಂತೆ
        ಬೆವರಿನ್ನೂ ಹಣೆಯ ಮೇಲಿಂದೊಣಗಿರಲಿಲ್ಲ
        ಮಂಡಿಯ ಮೇಲಿನ ಗಾಯವಿನ್ನೂ ಮಾಯ್ದಿರಲಿಲ್ಲವಂತೆ

        ಹಣ್ಣಾದ ಹಾಗಲಕಾಯಿ ಬೀಜದ ಉಜ್ವಲ ಕೆಂಪು
        ಬಣ್ಣದ ಸೀರೆಯಲ್ಲಿ ಸುತ್ತಿ,ಮಾವ ಅವಳನೆತ್ತಿ
        ನೆಹರು ಕಾಲರಿನ ಗುಲಾಬಿಯಂತೆ ಅಪ್ಪನಿಗೆ ಅಂಟಿಸಿದಾಗ
        ಅವಳಿಗಿಂತ ಸೀರೆಯೇ ಭಾರವಾಗಿತ್ತಂತೆ

        ಗುಲ್‍ಮೊಹರಿನ ಕಿಡಿಗಳು ಅರಳಿದಾಗ ವಸಂತ ಕಿರಣಗಳು
        ಕುಲುಕುಲು ನಕ್ಕಾಗ ಅವಳು ಏನೋ ನೆನಪಾದಂತೆ
        ಸೀರೆಯ ಹರವುತ್ತಾ ಹುಡುಕುವಳು ಮರುಭೂಮಿಯಲಿ
        ಒರತೆಯ ;ಉಡಲಿಲ್ಲ ಯಾರೊಬ್ಬರ ಮದುವೆ ಮುಂಜಿಗೂ

        ಒಡಲ ತುಂಬಾ ಅಡ್ಡಡ್ಡ-ಉದ್ದುದ್ದ ಗೆರೆಗಳು
        ಚೌಕುಳಿಯೊಳಗೆ ಬುಟ್ಟಾಗಳು ಅರಳದೇ ಅಲ್ಲಲ್ಲೇ
        ಮುದುಡಿದ ಕನಸುಗಳು ;ಸೆರಗಿನ ಸರಿಗೆಯಲ್ಲಿ
        ನೂರಾರು ವಾರೆ ಬಳ್ಳಿಗಳು ಅಪ್ಪಿ ತೊಡರಿದವೇ ?

        ತಾನು ಕುಡಿಸಿದ ಹಾಲೋ ತನ್ನೆದೆಯ ಬೆಚ್ಚನೆಯ
         ಮಿಡಿತವೋ ಎಂಬಷ್ಟು ಸಹಜ ಪ್ರೀತಿಯಿಂದ ದಾಟಿಸಲು ,
         ತೊಡಿಸಲು ನನಗೆ ಸಿದ್ಧಳಾಗಿಒಂದು ದಿನ ಬಿಡಿಸಿದಾಗ
        ಬರದ ಭೂಮಿಯ ಸೀಳುಗಳು ಅವಳ ಆತ್ಮದಂತೆ

        ಅವಳ ಹೂಮನದ ಸ್ಫಟಿಕತೆಗೆ ಸೋತು ಉಡಲು
        ಒಡ್ಡಿಕೊಂಡರೆ,ಕಣ್ಣಕೊನೆಯ ಶಲಾಕೆಯ ಅವಳು
        ಬೆರಳ ತುದಿಯಲ್ಲಿ ಕೊಸರಿ,ಅದನು ಉಂಡೆ ಮಾಡಿ
        ಚೆಂಡಾಟವಾಡುತ್ತಾ ನಾವಿಬ್ಬರೂ ನಕ್ಕಿದ್ದು ಗೆಳತಿಯರಂತೆ

No comments:

Post a Comment